ಇಕ್ಕೇರಿ

16 ಮತ್ತು 17ನೆಯ ಶತಮಾನಗಳಲ್ಲಿ ಕೆಳದಿ ಅರಸರ ವೈಭವಾನ್ವಿತ ರಾಜಧಾನಿಯಾಗಿ ಮೆರೆದ ಇಕ್ಕೇರಿ ಈಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಸಣ್ಣ ಹಳ್ಳಿ. ಸನ್ನಿವೇಶ : 1408' ಉದ್ದ. ಅಗಲ; 75.5' ಪೂ.ರೇ. ಸಹ್ಯಾದ್ರಿಯ ವನರಾಜಿಯ ನಡುವಿನಲ್ಲಿರುವ ಈ ಹಳ್ಳಿ 1560 ರಿಂದ 1639ರವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ವೀರಭದ್ರನಾಯಕನ ಆಡಳಿತ ಕಾಲದಲ್ಲಿ (1639) ಇಕ್ಕೇರಿ ವಿಜಯನಗರ ಅರಸರ ಅಧೀನತೆಯಿಂದ ಬೇರೆಯಾಗಿ ಸ್ವತಂತ್ರ ಸಂಸ್ಥಾನವೆನಿಸಿತು. ಅನಂತರ ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು. ಆದರೂ ಇಕ್ಕೇರಿ ಕೆಳದಿ ಅರಸರ ರಾಜಧಾನಿ ಎಂಬ ಗೌರವವನ್ನು ಬಹಳ ಕಾಲ ಪಡೆದಿತ್ತು. ಇಕ್ಕೇರಿಯಿಂದ ಟಂಕಸಾಲೆಯ ವರ್ಗವಾದರೂ ಇಕ್ಕೇರಿ ಪಗೋಡ, ಇಕ್ಕೇರಿ ಪಣಗಳು ಚಲಾವಣೆಯಲ್ಲಿದ್ದವು. 

ನಗರದ ಸುತ್ತಲೂ ಮೂರು ಸುತ್ತುಕಟ್ಟು ಆವರಣಗಳ ವಿಶಾಲವಾದ ಕೋಟೆ ಗೋಡೆಗಳಿದ್ದುವು. ಕೋಟೆಯಲ್ಲಿ ಅರಮನೆ ಮತ್ತು ಭವ್ಯ ಕಟ್ಟಡಗಳಿದ್ದುವು. ಗತವೈಭವದ ಕುರುಹಾಗಿ ಈಗ ಅಲ್ಲಿ ಉಳಿದಿರುವುದು ಅಘೋರೇಶ್ವರ ದೇವಾಲಯ ಮಾತ್ರ. ಈ ದೇವಾಲಯದಲ್ಲಿನ ಮಧ್ಯದ ಕಂಬಗಳ ಪರಸ್ಪರ ದೂರವನ್ನು ಬಾಗಾಯತಿನ ಪ್ರಮಾಣಬದ್ಧ ಅಳತೆ ಎಂದು ಪರಿಗಣಿಸಲಾಗುತ್ತಿತ್ತು. ಈ ಮಾನವನ್ನು ದಾಯ ಎಂದು ಕರೆಯುತ್ತಿದ್ದರು.								
 (ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ